ಬಾಗ್ ಸ್ತರಗಳು - 
ಮಧ್ಯಪ್ರದೇಶದ ಬಾಗ್ ಎಂಬ ಊರಿನ ಬಳಿಯ ಕ್ರಿಟೇಷಸ್ ಕಾಲಕ್ಕೆ ಸೇರಿದ ಸಾಗರ ಸಂಚಯನ ಶಿಲೆಗಳು. ಇವುಗಳ ಉಳಿಕೆಗಳನ್ನು ನರ್ಮದಾ ನದಿಯ ಕಣಿವೆಯಲ್ಲಿ, ಪಶ್ಚಿಮದಲ್ಲಿ ವಾದ್ವಾನಿನಿಂದ ಹಿಡಿದು ಪೂರ್ವದಲ್ಲಿ ಬರವಾಹದವರೆಗೂ ಸುಮಾರು 350 ಕಿಲೋಮೀಟರುಗಳ ಉದ್ದಕ್ಕೆ ಅಲ್ಲಲ್ಲಿ ಕಾಣಬಹುದು. ಬಾಗ್‍ಸ್ತರಗಳು ವಿಶೇಷವಾಗಿ ಆರ್ಕೇಯನ್ ರೂಪಾಂತರಿತ ಶಿಲೆಗಳ ಮೇಲೆ ಶೇಖರವಾಗಿವೆ. ಇವುಗಳ ಮೇಲೆ ಲೆಮೀಟಾ ಸ್ತರಗಳು ಇಲ್ಲವೇ ದಖ್ಖನ್ ಟ್ರಾಪ್ ಶಿಲೆಗಳು ಹರಡಿವೆ.

ಬಾಗ್‍ಸ್ತರಗಳನ್ನು ಅವುಗಳ ಶಿಲಾವಿಧಗಳ ಮತ್ತು ಜೀವ್ಯವಶೇಷಗಳ ಆಧಾರಗಳ ಮೇಲೆ ಈ ಮುಂದೆ ಕಾಣಿಸಿದಂತೆ ವಿಭಾಗಿಸಲಾಗಿದೆ:
ದಖ್ಖನ್ ಟ್ರಾಪ್ ಶಿಲೆ
			ಹವಳಪೂರಿತ ಸುಣ್ಣ ಶಿಲೆ
	          ಮೇಲ್ವಿಭಾಗ		ದೇವಲ ಮಾರ್ಲ್ ಶಿಲೆ
			ಉಂಡುಂಡೆಯಾಗಿರುವ ಸುಣ್ಣ ಶಿಲೆ
ಬಾಗ್‍ಸ್ತರಗಳು						
	           ಕೆಳವಿಭಾಗ		ನಿಮಾರ್ ಮರಳು ಶಿಲೆ

ಆರ್ಕೇಯನ್ ರೂಪಾಂತರ ಶಿಲೆಗಳು
ಬಾಗ್ ಬಳಿಯಲ್ಲಿ ನಿಮಾರ್ ಶಿಲೆಗಳು ತಳಭಾಗದಲ್ಲಿ ಕಂಗ್ಲಾಮರೇಟ್ ಶಿಲೆಯಿಂದಲೂ ಮೇಲ್ಭಾಗದಲ್ಲಿ ಮರುಳುಶಿಲೆ ಮತ್ತು ಷೇಲ್ ಶಿಲೆಗಳಿಂದಲೂ ಕೂಡಿವೆ. ಈ ಸ್ತರಗಳು ಪಶ್ಚಿಮಕ್ಕೆ ಮುಂದುವರಿಯುತ್ತ ದಪ್ಪವಾಗುತ್ತ ಹೋಗುತ್ತವೆ. ಇತ್ತೀಚೆಗೆ ನಿಮಾರ್ ಮರಳುಶಿಲೆಗಳಲ್ಲಿ ಕೆಲವು ಮೇಲು ಗೊಂಡ್ವಾನ ಯುಗವನ್ನು ಸೂಚಿಸುವ ಸಸ್ಯಾವಶೇಷಗಳು ಕಂಡು ಬಂದಿರುವುದಿರಂದ, ಈ ವಿಭಾಗ ಗೊಂಡ್ವಾನ ಯುಗಕ್ಕೆ ಸೇರಿರಬಹುದೆಂದೂ ಭಾವಿಸಲಾಗಿದೆ. ಮೇಲ್ವಿಭಾಗದ ಬಾಗ್‍ಸ್ತರಗಳಲ್ಲಿ ಜೀವ್ಯವಶೇಷಗಳು ವಿಶೇಷವಾಗಿ ದೊರಕಿವೆ. ಇವಾದರೂ ಮಧ್ಯಭಾಗದ ಸುಮಾರು 3 ಮೀಟರುಗಳಷ್ಟು ದಪ್ಪಗಿರುವ ದೇವಲ ಮಾರ್ಲ್ ಶಿಲೆಯಲ್ಲೇ ಹೆಚ್ಚು. ಈ ಅವಶೇಷಗಳ ಆಧಾರದ ಮೇಲೆ ಬಾಗ್‍ಸ್ತರಗಳು ಕ್ರಿಟೇಷಸ್ ಕಾಲದ ಸೊನೋಮೇನಿಯನ್-ಟ್ಯುರೋನಿಯನ್ ಅವಧಿಗೆ ಸೇರಿದ್ದೆಂದು ಭಾವಿಸಲಾಗಿದೆ. ಕೆಲವು ಕಡೆಗಳಲ್ಲಿ ಬಾಗ್‍ಸ್ತರಗಳ ಮೇಲೆ ಕ್ರಿಟೇಷಸ್ ಕಾಲಕ್ಕೇ ಸೇರಿದ ಲೆಮಿಟಾ ಸ್ತರಗಳು ಹರಡಿರುವುದು ಕಂಡುಬಂದಿರುವುದರಿಂದ ಬಾಗ್‍ಸ್ತರಗಳು ಲೆಮಿಟಾ ಸ್ತರಗಳಿಗಿಂತ ಪುರಾತನವಾದವೆಂದು ಹೇಳಬಹುದು.
ಬಾಗ್ ಸ್ತರಗಳಲ್ಲಿ ಬ್ರಯೋಸೋವ, ಹವಳ, ಶಂಖ, ಅಮ್ಮೊನೈಟ್ ಮತ್ತು ಎಕಿನಾಯಿಡ್ ಗುಂಪುಗಳಿಗೆ ಸೇರಿದ ಅನೇಕ ಪ್ರಾಣಿಗಳ ಅವಶೇಷಗಳು ಹೇರಳವಾಗಿ ದೊರೆತಿವೆ. ಈ ಸ್ತರಗಳ ಮುಖ್ಯ ವಿಶೇಷಗಳಿವೆ: 1. ಕ್ರಿಟೇಷಸ್ ಕಾಲದಲ್ಲೇ ಸಾಗರಗಳಲ್ಲಿ ಶೇಖರವಾದ ದಕ್ಷಿಣ ಭಾರತದ ತಿರುಚ್ಚೀರಪಳ್ಳಿ ಬಳಿಯ ಸ್ತರಗಳ ಜೀವ್ಯವಶೇಷಗಳಿಗೂ ಬಾಗ್ ಸ್ತರಗಳ ಜೀವ್ಯವಶೇಷಗಳಿಗೂ ಇರುವ ವ್ಯತ್ಯಾಸ; 2. ಬಾಗ್‍ಸ್ತರಗಳ ಜೀವ್ಯವಶೇಷಗಳಿಗೂ ಅರೇಬಿಯಾ ಮತ್ತು ದಕ್ಷಿಣ ಯೂರೋಪಿನ ಕ್ರಿಟೇಷಸ್ ಜೀವ್ಯವಶೇಷಗಳಿಗೂ ಕಂಡುಬರುವ ಬಹಳವಾದ ಹೋಲಿಕೆ. ಈ ಕಾರಣಗಳಿಮದ ಕ್ರಿಟೇಷಸ್ ಕಾಲದ ಟೆತಿಸ್ ಸಮುದ್ರದ ಒಂದು ಚಾಚಿನಿಂದ ಬಾಗ್‍ಸ್ತರಗಳು ಶೇಖರವಾಗಿವೆಯೆಂದೂ ಆದರೆ ದಕ್ಷಿಣ ಭಾರತದ ಇದೇ ಕಾಲದ ಸ್ತರಗಳು ಹಿಂದೂಸಾಗರದ ಅತಿಕ್ರಮಣದಿಂದ ಉಂಟಾಗಿರುವುವೆಂದೂ ನಂಬಲಾಗಿದೆ. ಪ್ರಾಯಶಃ ಈ ಎರಡೂ ಜಲಾಶಯಗಳು ಒಂದಕ್ಕೊಂದು ಸೇರಿರಲಿಲ್ಲವಾದ್ದರಿಂದ ಇವುಗಳಲ್ಲಿಯ ಜೀವ್ಯವಶೇಷಗಳು ವಿಭಿನ್ನವಾಗಿರುವುದಕ್ಕೆ ಕಾರಣವೆಂದು ಹೇಳಬಹುದು. ಆದರೂ ಬಾಗ್‍ಸ್ತರಗಳಲ್ಲಿ ಮತ್ತು ದಕ್ಷಿಣ ಭಾರತದ ಪೂರ್ವತೀರದಲ್ಲಿ ಹರಡಿರುವ ಕ್ರಿಟೇಷಸ್ ಸ್ತರಗಳಲ್ಲಿ ಕೆಲವು ಒಂದೇ ತರಹದ ಪ್ರಾಣಿಗಳ ಅವಶೇಷಗಳು ಕಂಡುಬಂದಿವೆ. ಈ ಆಧಾರದಿಂದಲೇ ಬಾಗ್‍ಸ್ತರಗಳ ಮೂಲಕ ಟೆತಿಸ್ ಸಮುದ್ರವೂ ಹಿಂದೂಸಾಗರವೂ ಸೇರ್ಪಡೆಯಾಗಿತ್ತೆಂದು ನಿರ್ಧಾರವಾಗಿ ಹೇಳಲಾಗುವುದಿಲ್ಲ.	
(ಎಂ.ವಿ.ಎ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ